ಆನಂದಗಿರಿ -
ಶಂಕರಾಚಾರ್ಯರ ಅದ್ವೈತ ಸಂಪ್ರದಾಯದಲ್ಲಿ ಪ್ರಸಿದ್ಧರಾದ ವ್ಯಾಖ್ಯಾನಕಾರರು. ಆನಂದಜ್ಞಾನ ಎಂದು ಹೆಸರಿದ್ದಂತೆ ಕಾಣುತ್ತದೆ. ಇವರಿಂದ ಒಂದು ಶಂಕರವಿಜಯವೂ ರಚಿತವಾಗಿತ್ತೆಂದು ಪ್ರತೀತಿ ಇದೆ. ಶಂಕರಾಚಾರ್ಯರ ಸರ್ವ ಉಪನಿಷದ್ಭಾಷ್ಯಗಳಿಗೂ ಗೀತಾಭಾಷ್ಯಕ್ಕೂ ಬ್ರಹ್ಮಸೂತ್ರ ಸುಂದರವೂ ಉಪಯುಕ್ತವೂ ಆದ ವ್ಯಾಖ್ಯಾನಗಳನ್ನು ರಚಿಸಿದ್ದಾರೆ. ಹಾಗೆಯೇ ಸುರೇಶ್ವರರ ಬೃಹದಾರಣ್ಯಕ ಭಾಷ್ಯವಾರ್ತಿಕಕ್ಕೆ ಉತ್ತಮ ವ್ಯಾಖ್ಯಾನ ಒದಗಿಸಿದ್ದಾರೆ. ವಾಚಸ್ಪತಿಮಿಶ್ರರ ಭಾಮತಿಯಾದ ಮೇಲೆ ಇವರ ಸೂತ್ರ ಭಾಷ್ಯಾವ್ಯಾಖ್ಯಾನ ಬಂದಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಕಾಲ ಸುಮಾರು 12 ಅಥವಾ 13ನೆಯ ಶತಮಾನವಾಗಿರಬಹುದು. ಕಂಚೀ ಕಾಮಕೋಟಿ ಮಠಾಧೀಶ್ವರರಾಗಿದ್ದರೆಂದೂ ಪ್ರತೀತಿ. ಭಾಷ್ಯಕಾರರ ಸರ್ವಭಾಷ್ಯಗಳಿಗೂ ವ್ಯಾಖ್ಯಾನ ಮಾಡಿದವರೆಂದು ಸಂಪ್ರದಾಯದಲ್ಲಿ ಇವರಿಗೆ ವಿಶೇಷಪೂಜ್ಯತೆಯನ್ನು ಸಲ್ಲಿಸಲಾಗಿದೆ. 			
(ಕೆ.ಕೆ.; ಎಸ್.ಎಸ್.ಆರ್.)